ನರೇಗಲ್
	ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯಲ್ಲಿರುವ ರೋಣ ತಾಲ್ಲೂಕಿನ ಒಂದು ಪಟ್ಟಣ. ರೋಣದಿಂದ ಆಗ್ನೇಯಕ್ಕೆ ಸುಮಾರು 16 ಕಿಮೀ. ಮತ್ತು ಮಲ್ಲಾಪುರ ರೈಲ್ವೆ ನಿಲ್ದಾಣದಿಂದ 32 ಕಿಮೀ. ದೂರದಲ್ಲಿ 150 40  ಮತ್ತು ಪೂರೇ.  750 41 ಮೇಲೆ ಇದೆ. ಜನಸಂಖ್ಯೆ 12,707 (1971). ಇದಕ್ಕೆ ಪ್ರಾಚೀನ ಕಾಲದಲ್ಲಿ ಮೊದಲು ನರೇಂಗಲ್ ಪನ್ನಾಸು ಎಂದೂ ಅನಂತರ ನರೇಂಗಲ್ ಪನ್ನೆರಡು ಎಂದೂ ಹೆಸರುಗಳಿದ್ದುವೆಂಬುದು ಶಾಸನಗಳಿಂದ ತಿಳಿದು ಬರುತ್ತದೆ. ನರೇಂಗಲ್ ಎಂಬುದು ಕಾಲಕ್ರಮದಲ್ಲಿ ನರೆಯಂಗಲ್ಲಾಗಿ ಅನಂತರ ನರೇಗಲ್ಲ, ನರೇಗಲ್ ಎಂದು ಹೆಸರು ಪಡೆಯಿತು. 12ನೆಯ ಶತಮಾನದಲ್ಲಿ ಚಾಳುಕ್ಯರ ಆಧಿಪತ್ಯದಲ್ಲಿಯ ಸಿಂಧಮಹಾಮಾಂಡಲಿಕರು ಈ ಭಾಗವನ್ನು ಆಳಿದರು. ಇಲ್ಲಿಯವರೆಗೆ ದೊರೆತಿರುವ 10 ಶಿಲಾಶಾಸನಗಳ ಪೈಕಿ ಚಾವಡಿಯ ಎದುರಿಗೆ ದೊರೆತ ರಾಷ್ಟ್ರಕೂಟರ 3ನೆಯ ಕೃಷ್ಣನ ಕಾಲದ (950) ಶಿಲಾಶಾಸನವೇ ಅತ್ಯಂತ ಹಳೆಯದು. ಪದ್ದಬ್ಬರಸಿಯಿಂದ ಬಸದಿಯ ನಿರ್ಮಾಣ ಹಾಗೂ ದಾನಕ್ಕೆ ಅದು ಸಂಬಂಧಿಸಿದೆ.

	ಉತ್ತರ ಕರ್ನಾಟಕದ ಬಯಲು ಸೀಮೆಯಲ್ಲಿರುವ ಈ ಪಟ್ಟಣದ ಸುತ್ತಲೂ ಫಲವತ್ತಾದ ಕಪ್ಪುಭೂಮಿಯಲ್ಲಿ ಹತ್ತಿ, ಸೇಂಗ ಮತ್ತು ಜೋಳ ಬೆಳೆಯುತ್ತದೆ. ಈ ಸುತ್ತಿನಲ್ಲಿ ವರ್ಷಕ್ಕೆ ಸುಮಾರು 677 ಮಿಮೀ. ಮಳೆಯಾಗುತ್ತದೆ. ಗರಿಷ್ಠ ಹಾಗೂ ಕನಿಷ್ಠ ಉಷ್ಣತೆಗಳು ಅನುಕ್ರಮವಾಗಿ 40.2ಅº ಮತ್ತು 13.0ಅº.

	1973ರಲ್ಲಿ ಪೌರಸಭೆ ಪ್ರಾರಂಭವಾಯಿತು. ಅನೇಕ ವರ್ಷಗಳಿಂದ ಶ್ರೀ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿ ಹಲವಾರು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದೆ. 1966ರಲ್ಲಿ ಸ್ಥಾಪಿತವಾದ ಶ್ರೀ ಅನ್ನದಾನೇಶ್ವರ ಕಲಾ ಮತ್ತು ವಿಜ್ಞಾನ ಕಾಲೇಜು ಇವುಗಳ ಪೈಕಿ ಪ್ರಮುಖವಾದ್ದು. ಹೊರ ಊರುಗಳಿಂದ ಬರುವ ವಿದ್ಯಾರ್ಥಿಗಳಿಗಾಗಿ ಹಾಲಕೆರೆಯ ಶ್ರೀ ಅನ್ನದಾನ ಮಹಾಸ್ವಾಮಿಗಳ ಉಚಿತ ವಿದ್ಯಾರ್ಥಿನಿಲಯದಲ್ಲಿ ಪ್ರತಿದಿನವೂ ಸುಮಾರು 500 ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯಿದೆ.

	ನರೇಗಲ್ಲಿನ ಅನೇಕ ಪುರಾತನ ದೇವಾಲಯಗಳ ಪೈಕಿ ನಾರಾಯಣ ಮತ್ತು ಕಾಮೇಶ್ವರ ದೇವಸ್ಥಾನಗಳು ಮುಖ್ಯವಾದವು. ಚಿಕ್ಕದಾದ ಕಲ್ಮೇಶ್ವರ ದೇವಾಲಯದ ಹೊರ ಅಂಗಣದ ಕಟ್ಟೆಯ ಮೇಲಿರುವ ದ್ವಿಬಾಹುಮಹಿಷಮರ್ದಿನಿಯ ಮೂರ್ತಿ ಅಪೂರ್ವವಾದ್ದು. ಇದರ ಶಿಲ್ಪ 5ನೆಯ ಶತಮಾನದ ಶಿಲ್ಪ ಶೈಲಿಗೆ ಒಪ್ಪುವಂಥದಾಗಿದೆಯೆಂಬುದು ತಜ್ಞರ ಅಭಿಪ್ರಾಯ. ಈ ಶತಮಾನದ ಆದಿಯಲ್ಲಿ ಆಗಿಹೋದ ಮಹಿಮಾಪುರುಷ ಕೋಡಿತೊಪ್ಪದ ಹಠಯೋಗಿ ಶ್ರೀ ಹುಚ್ಚೀರಪ್ಪಜ್ಜನವರ ಜಾತ್ರೆ ಇಲ್ಲಿ ಪ್ರತಿವರ್ಷವೂ ಮಹಾಶಿವರಾತ್ರಿಯ ಅಮಾವಾಸ್ಯೆಯಂದು ನಡೆಯುತ್ತದೆ. ಅದು ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಸುಮಾರು 700 ವರ್ಷಗಳ ಹಿಂದೆ ಇಲ್ಲಿದ್ದ ಪುರುಷ ರಹಮಾನ್ ಶಾಹವಲಿ ಎಂಬ ಮುಸ್ಲಿಮನ ದರಗಾ ಹಿಂದು-ಮುಸ್ಲಿಮರಿಬ್ಬರಿಗೂ ಪವಿತ್ರಸ್ಥಳವಾಗಿ ಭಾವೈಕ್ಯದ ಪ್ರತೀಕವೆನಿಸಿದೆ.			
		(ವಿ.ಎಸ್.ಬಿ.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ